ಅತಿ ಅಪರೂಪವೆಂಬಂತೆ ಮೋಡ ಕವಿದ ವಾತಾವರಣ.ನಿಧಾನವಾಗಿ ಮರುಭೂಮಿಯ ಅಪರೂಪದ ಅತಿಥಿ ಮಳೆರಾಯ ಗಗನಚುಂಬಿ ಕಟ್ಟಡಗಳಿಗೆ ಮುತ್ತಿಡಲಾರಂಭಿಸಿದ್ದ.ನಾನೆಂಬ ಕೈದಿಯನ್ನು ಮನೆಯೆಂಬ ಜೈಲಿನಿಂದ ಸ್ವಲ್ಪ ಸಮಯದ ಮಟ್ಟಿಗೆ ಶಾಪಿಂಗ್ ಮಾಲ್ ಎಂಬ ಜೈಲಿಗೆ ಕರೆದೊಯ್ದಿದ್ದ ನನ್ನ ಗಂಡ ಮರುಳಿ ಮನೆಗೆ ಸಾಗಿಸುವ ಯತ್ನದಲ್ಲಿದ್ದರು.ಆದರೆ ಈ ಕೈದಿ ಮನ ಆ ಎರಡು ಜೈಲುಗಳ ಮಧ್ಯದ ಗಾಳಿ ಬೆಳಕಿನ ಸ್ವಚ್ಛಂದ ವಾತಾವರಣದಲ್ಲಿ ಹುಚ್ಚೆದ್ದು ಕುಣಿಯಬಯಸುತ್ತಿತ್ತು.ದೊಡ್ಡ ದೊಡ್ಡ ರಸ್ತೆಗಳ ಮಧ್ಯೆ ನಿಂತಿರುವ ಹಚ್ಚ ಹಸಿರು ಸಾಲು ಮರಗಳ ಮಧ್ಯೆ ಮೈಮರೆಯಬಯಸುತ್ತಿತ್ತು.ಆದರೆ ಈ ಮರುಭೂಮಿಯ ಜನರು ಕಷ್ಟ ಪಟ್ಟು ಬೆಳೆಸಿರುವ ಈ ಮರಗಳು ಇವರ ಹೆಮ್ಮೆಯ ಪ್ರತೀಕ.ಇವರೆಲ್ಲಿ ಕಷ್ಟ ಪಟ್ಟಾರು. ಮಣ್ಣು, ಗಿಡಗಳೊಂದಿಗೆ ಕೆಲಸಕ್ಕೆ ಜನರನ್ನೂ ಪಾಪ ನಮ್ಮ ದೇಶಗಳಿಂದಲೇ ಆಮದು ಮಾಡಿಕೊಳ್ಳುವ ಶೋಕಿಲಾಲರು.ನಮ್ಮೂರ ವಿ.ಐ. ಪಿ. ಗಳಾದರೂ ಅಪ್ಪಿ ತಪ್ಪಿ ಒಮ್ಮೆ ಭೇಟಿಯಾದಾರು . ಆದರೆ ಈ ಸಾಲು ಮರಗಳಲ್ಲಿಗೆ ಸಾಗಲು ಜನಸಾಮಾನ್ಯರಿಗೆ ಅನುಮತಿ ಇದೆಯೋ ತಿಳಿದಿಲ್ಲ.ನನ್ನ ಪತಿರಾಯರನ್ನು ಕೇಳೋಣವೆಂದರೆ, ಏಕೋ ಇಬ್ಬರೂ ಮೌನ ಮುರಿಯುವ ಆಸಕ್ತಿಯಲ್ಲಿರಲಿಲ್ಲ.
ನನ್ನನ್ನು, ಹಚ್ಚ ಹಸಿರಿನ ಊರಿಂದ ದುಬೈ ಎಂಬ ಮರುಭೂಮಿಗೆ ತಂದು ಹಾಕಿದಿರೆಂದು, ದಿನಾ ಪತಿಯನ್ನು ದೂಷಿಸುವ ನನ್ನ ಬಾಯಿಗೆ ಬೀಗ ಜಡಿದಿತ್ತು. ಎಡೆಬಿಡದೆ ಮಾತಾಡಿ ತಲೆತಿನ್ನುವ ಹೆಂಡತಿ ಇಂದು ಮೌನದ ಮೊರೆ ಹೋಗಿದ್ದನ್ನು ಕಂಡು ವಿಚಿತ್ರವೆನಿಸಿದರೂ, ಅವರು ಅದನ್ನು ವಿಚಾರಿಸುವ ಗೋಜಿಗೆ ಹೋಗಲಿಲ್ಲ.ಅಪ್ಪಿ ತಪ್ಪಿ ಮೌನವಾಗಿದ್ದಾಳೆ. ಸಧ್ಯಕ್ಕೆ ಇವಳ ಬಾಯಿಗೆ ಕೋಲು ಹಾಕುವುದು ಬೇಡ.ಅಗತ್ಯ ಬಿದ್ದರೆ ನೋಡೋಣ ಎಂಬಂತೆ ಏನೋ ಗುನುಗುನಿಸುತ್ತ ಹಿಂದಿ ಸಿನಿಮಾ ಹಾಡುಗಳಲ್ಲಿ ತಲ್ಲೀನರಾಗಿದ್ದಾರೆ. ನಾನು ಮೌನವಾಗಿ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದರಲ್ಲಿ ಲೀನವಾದೆ. ಮರುಭೂಮಿಯಲ್ಲೊಂದು ಸುಂದರ ಚಿಟಿ ಚಿಟಿ ಮಳೆ ನೋಡಲು ಮನದಲ್ಲೇನೋ ಸಂಭ್ರಮ.ನಿತ್ಯ ಕೃತಕ ಆಭರಣಗಳಿಂದ ಅಲಂಕೃತಗೊಳ್ಳುವ ದುಬೈ ನಗರಿ, ಇಂದು ಸ್ವಾತಿ ಮುತ್ತಿನಿಂದಲಂಕೃತ ದಾವಣಿ ಹೊದ್ದ ಸುರ ಸುಂದರಿಯಂತೆ ಕಂಡಳು ನನ್ನ ಕಣ್ಣಿಗೆ.ನಿಧಾನವಾಗಿ ನನ್ನ ಮನಸ್ಸಿನ ಪಯಣ ನನ್ನೂರಿನೆಡೆಗೆ ಸಾಗಿತ್ತು. ಸಧ್ಯ, ಮನಸ್ಸಿಗೆ ವೀಸಾ, ಪಾಸ್ ಪೋರ್ಟ್, ಟಿಕೆಟ್ಗಳ ಅಗತ್ಯ ಇಲ್ಲ. ಮನಸ್ಸಾದಾಗ ಮನಸು ಊರಿಗೆ ಹೊರಟು ಬಿಡುತ್ತದೆ.ಮುಂದೊಂದು ದಿನ ಮನಸ್ಸನ್ನು ಭೌತಿಕ ವಸ್ತುವೆಂದು ಪರಿಗಣಿಸಿ, ಅದನ್ನು ಟ್ರ್ಯಾಕ್ ಮಾಡಿ ಅದಕ್ಕೂ ದರ ನಿಗದಿಪಡಿಸಿದರೆ ದೇವರೇ ಗತಿ. ಭಗವಂತ ಹಾಗಾಗದಿರಲಿ.
ಎಷ್ಟು ಸುಂದರವಾದ ಶಾಲೆಯ ದಿನಗಳು. ಮಳೆಯಲ್ಲಿ ನೆನೆಯುತ್ತ ಮನೆಗೆ ಬರುವಾಗ ಬಾಗಿಲಲ್ಲೆ ಟವೆಲ್ ಹಿಡಿದು ಕಾಯುತ್ತ ನಿಂತಿರುತ್ತಿದ್ದಳು ಅಮ್ಮ.ಮಳೆ ಬಂದರೆ ಖುಷಿಯೋ ಖುಷಿ.ಮನೆಯಲ್ಲಿ ಸಂಜೆ ಕಾಫಿಯ ಜೊತೆ ಬಜ್ಜಿ ಬೋಂಡಗಳು ತಯಾರಾಗುತ್ತವೆ.ಆಹಾ ಈಗಲೂ ಬಾಯಲ್ಲಿ ನೀರೂರುತ್ತಿದೆ.ನನಗೆ- ತನಗೆ ಎಂದು ತಮ್ಮನೊಂದಿಗೆ ಕಚ್ಚಾಡಲು ಶುರು ಮಾಡಿದರೆ ಅಮ್ಮ ರೋಸಿ ಹೋಗುತ್ತಿದ್ದಳು. ಈಗ ನೆನಪಾದರೆ ನಗು ಬರುತ್ತದೆ.ಈಗಲಾದರೆ ನನ್ನ ಪಾಲಿನ ತಿಂಡಿಯನ್ನು ಖುಷಿ ಖುಷಿಯಾಗಿ ಪತಿರಾಯರಿಗೆ ಕೊಟ್ಟುಬಿಡುತ್ತೇನೆ.ನನ್ನ ನಳಪಾಕವನ್ನು ಅವರ ಮೇಲೆ ಪ್ರಯೋಗಿಸಿ, ಅವರ ಅಭಿಪ್ರಾಯ ತಿಳಿಯುವ ತವಕದಲ್ಲಿ ಹಸಿವಿನ ಅರಿವೇ ಆಗುವುದಿಲ್ಲ. ಪಾಪ ತಮ್ಮ.ನನಗಿಂತ ಚಿಕ್ಕವನು.ಸ್ವಲ್ಪ ಜಾಸ್ತಿ ತಿಂದರೆ ಏನಾಗುತ್ತಿತ್ತು.ಆದರೆ ಅಷ್ಟು ಒಳ್ಳೆಯ ಬುದ್ಧಿ ಆಗ ಇರಲಿಲ್ಲವಲ್ಲ, ಏನು ಮಾಡುವುದು? ಏನೇ ಆಗಲಿ, ಈಗ ಅವೆಲ್ಲ ಸುಂದರ ನೆನಪುಗಳಾಗಿ ಮನಸ್ಸಿನ ಬುತ್ತಿಯಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ಉಳಿದು ಹೋಗಿಲ್ಲವೇ? ಚಿಕ್ಕವರಿದ್ದಾಗ ತರಲೆ ಮಾಡದೆ ಈಗ ಮಾಡಲಾದೀತೇ?
ತಮ್ಮನಿಗೊಮ್ಮೆ ಫೋನಾಯಿಸಿ, ಹಳೆಯದನ್ನು ನೆನಪಿಸಿ ರೇಗಿಸಬೇಕೆನಿಸಿತು. ಎರಡು ಮಾವಿನ ಹಣ್ಣಿನಲ್ಲಿ ಯಾವುದು ದೊಡ್ಡದು ಎಂದು ತಿಳಿಯದಾದರೆ, ಅಕ್ಕ ಮೊದಲು ತೆಗೆದುಕೊಳ್ಳಲಿ ಎಂದು ಕಾಯುತ್ತಿದ್ದ.ಆಮೇಲೆ ಅದೇ ಬೇಕೆಂದು ತಗಾದೆ ಎತ್ತುತ್ತಿದ್ದ. ಅಮ್ಮ ಬೇರೆ ಅವನ ಪಕ್ಷವೆ.ಪಾಪ ಅವನು ಚಿಕ್ಕವನಲ್ಲವೆ.ಅವನಿಗೆ ಬೇಕಾದ್ದು ಕೊಡು ಎಂದು. ನನಗಿಂತ ಎರಡು ವರ್ಷ ಚಿಕ್ಕವನು. ಇನ್ನು ಕೋಣದಂತೆ ಬೆಳೆದರೂ ಅವನೇ ಚಿಕ್ಕವನು. ನಾನು ಚಿಕ್ಕವಳಾಗಲಾದೀತೆ ಎಂಬುದು ನನ್ನ ಸಮಸ್ಯೆ. ಕೊನೆಗೆ ಇದು ಯಾವ ಬಣ್ಣದ ಟೂತ್ ಬ್ರಶ್ ಬೇಕು, ಯಾವ ಬಣ್ಣದ ಬೆಡ್ ಶೀಟ್ ಬೇಕು ಎಂಬುದರವರೆಗೆ ಬೆಳೆದಾಗ, ಇದಕ್ಕೆ ತೆರೆ ಎಳೆಯಲು ಯಾವುದಾದರೊಂದು ಹೊಸ ದಾರಿ ಹುಡುಕಬೇಕೆನಿಸಿತ್ತು.ಅವನ ಹಟದ ಮುಂದೆ ನನ್ನ ಹಠ ಗೆಲ್ಲುತ್ತಿರಲಿಲ್ಲ. ಏನೇ ಆಗಲಿ, ಸುಮ್ಮನೆ ಸೋಲೊಪ್ಪುವುದು ಹೇಗೆ? ನಾನು ನನಗೆ ಬೇಡವಾದದ್ದನ್ನು ಮೊದಲು ಆರಿಸಲು ಶುರುಮಾಡಿದೆ. ಅವನು ಅದೇ ಬೇಕೆಂದು ಹಠ ಹಿಡಿದು ಕಿತ್ತುಕೊಂಡು ಹೋಗುತ್ತಿದ್ದ.ನನಗೆ ಬೇಕಾದದ್ದು ನನಗೆ ಸಿಗುತ್ತಿತ್ತು.ಜೊತೆಗೆ ಅವನಿಗೆ ಚಳ್ಳೆ ಹಣ್ಣು ತಿನ್ನಿಸಿದ ಖುಷಿ ಬೇರೆ.ಈಗ ನೆನೆದು ನಗು ಬರುತ್ತಿದೆ.ಈಗ ಅವನು ನನಗೆ ಬೈದು ಬುದ್ಧಿ ಹೇಳುವ ಪರಿ ನೋಡಿದರೆ, "ಒಂದೊಮ್ಮೆ ಇವನ ಕೈ ಹಿಡಿದು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದವಳು ನಾನೇನ" ಎಂಬ ಅನುಮಾನ ಬರುತ್ತದೆ.
ಇಂದೇಕೋ ತಲೆಗೆ ಮತ್ತೆ ತರಲೆ ಯೋಚನೆಗಳು ಬರುತ್ತಿವೆ. ಮತ್ತೆ ಆ ಸುಂದರ ನೆನಪುಗಳಲ್ಲಿ ಬದುಕಬೇಕೆನಿಸುತ್ತಿದೆ.ಮನೆಗೆ ಬಂದವಳೇ ಮಳೆಯ ವಾತಾವರಣಕ್ಕೆ ಸರಿ ಹೊಂದುವಂತೆ ಎ.ಸಿ. ಉಷ್ಣತೆ ಕಡಿಮೆ ಮಾಡಿದೆ.ದಿನಾ ಚಳಿ ಎಂದು ಜಗಳ ಕಾಯುವವಳು ಇಂದು ತಂತಾನೇ ಚಳಿಯಲ್ಲಿರಲು ಬಯಸಿದಾಗ ನನ್ನ ಪತಿಗೆ ಆಶ್ಚರ್ಯವಾಗಿತ್ತು.ಮತ್ತೆ ಚಳಿ ತಡೆಯಲಾಗದೆ ನಾನು ಸ್ವೆಟರ್ ಹಾಕಿ ಬಂದಾಗ ಮೃಗಾಲಯದ ಪ್ರಾಣಿಯನ್ನು ನೋಡುತ್ತಿರುವಂತೆ ನೋಟ ಬೀರಿದರು. ಅಮ್ಮ ಮಾಡಿದ ಈರುಳ್ಳಿ ಬಜ್ಜಿಯಂತೂ ಕನಸೇ ಸರಿ. ಸರಿ, ನಾನೇ ಮಾಡೋಣವೆಂದು ಹೊರಟೆ. "ಡಯಟಿಂಗ್" ಎಂಬ ಹೆಸರಿನಲ್ಲಿ ಬಿಸಿಎಣ್ಣೆ ಪದಾರ್ಥಗಳ ಪರಿಮಳ ಮೂಗಿಗೆ ಬಡಿಯದೆ ತಿಂಗಳುಗಳೇ ಆಗಿದ್ದವು.ಇಂದೇಕೋ ಹಬ್ಬ ಆಚರಿಸುವಷ್ಟು ಸಂಭ್ರಮ.ಅಡಿಗೆ ಮನೆಯ ಕಿಟಕಿಯಿಂದ ಮಳೆ ನೋಡಲು ಮತ್ತೆ ಇಣುಕಿದೆ.ರಸ್ತೆ ಬದಿಯಲ್ಲಿ ಥಳಕು ಬಳಕು ಸುಂದರಿಯರಂತೆ, ಉದ್ದುದ್ದ ಬೆಳೆದು ನಿಂತಿರುವ ಮರಗಳಿಗೂ ಸಂಭ್ರಮ. ಎಲ್ಲಿಂದಲೋ ಆಮದಾಗುವ ಚೂರು ಪಾರು ಮಣ್ಣಿನಲ್ಲಿ ಪಾಪ ಅವು ನಮ್ಮೂರ ಮರಗಳಂತೆ ಅಡ್ಡಡ್ಡ ಚಾಚಿಕೊಳ್ಳಲು ಸಾಧ್ಯವೇ? ಅವುಗಳದು ಒತ್ತಾಯ ಪೂರ್ವಕ ಡಯೆಟಿಂಗ್.ಇಂದು ಮನಸ್ಪೂರ್ತಿಯಾಗುವವರೆಗೆನೀರು ಕುಡಿಯುವ ಆತುರದಲ್ಲಿದ್ದಂತೆನಿಸಿತು. ಒಂದಕ್ಕಿಂತ ಒಂದು ಎತ್ತರದ ಕಟ್ಟಡಗಳು ಮಳೆರಾಯನ ಸ್ವಾಗತಕ್ಕೆ ಆಗಸಕ್ಕೇ ಲಗ್ಗೆ ಇಟ್ಟಂತಿತ್ತು.
ನನ್ನ ಪತಿರಾಯರು ಬಜ್ಜಿ ಯಾವಾಗ ಸಿಗುವುದೋ ಎಂದು ವಾರದಿಂದ ಹಸಿದಿದ್ದವರಂತೆ ಕಾಯುತ್ತ ಕುಳಿತರು. ಬಜ್ಜಿಯ ಜೊತೆ ಇನ್ನೊಂದು ಚಹಾ ಬೇರೆ ಸಿಗುತ್ತದೆಂದು ಹಿಗ್ಗುತ್ತಿದ್ದರು. ಅಂತೂ ಇನ್ನೊಂದು ಮುಕ್ಕಾಲು ಗಂಟೆಯಲ್ಲಿ ನನ್ನ ಬಜ್ಜಿ ಪುರಾಣ ಮುಗಿಯುವ ಹಂತಕ್ಕೆ ಬಂತು.ಅಮ್ಮನ ಬಜ್ಜಿಯಷ್ಟು ರುಚಿಯಾಗದಿದ್ದರೂ ಮನಸ್ಸಿಗೆ ಖುಷಿಯಾಗಿತ್ತು. ಬಜ್ಜಿಗಳನ್ನು ಎರಡು ತಟ್ಟೆಗಳಲ್ಲಿ ಹಾಕಿ ತಂದೆ. ಮೊದಮೊದಲು ನನ್ನ ಹೊಸರುಚಿಯೆಂದರೆ ಬೆಚ್ಚಿಬೀಳುತ್ತಿದ್ದ ನನ್ನ ಪತಿಗೆ ಈಗ ಅದು ಅಭ್ಯಾಸವಾದಂತಿದೆ. ಬಜ್ಜಿಯ ತಟ್ಟೆ ಯಾವಾಗ ಎದುರು ಬರುವುದೋ ಎಂದು ಕಾಯುತ್ತ, ಕಾತರ ಗೋಚರಿಸದಿರಲೆಂದು, ಕಾಮೆಡಿ ಶೋವನ್ನು ಕೂಡ ರಾಜ ಗಾಂಭೀರ್ಯದಿಂದ ನೋಡುತ್ತ ಕುಳಿತಿದ್ದರು. ಬಜ್ಜಿಯನ್ನು ಅವರ ಮುಂದಿತ್ತು ಚಹಾ ತರುವೆನೆಂದು ಹೋದೆ.ಸ್ವಲ್ಪ ಸಮಯದಲ್ಲಿ ಚಹಾ ಹಿಡಿದು ಬಂದ ನನ್ನ ನೋಡಿ ನನ್ನ ಪತಿರಾಯರು ಮುಸಿ ಮುಸಿ ನಗುತ್ತಾ ಕುಳಿತಿದ್ದಾರೆ. ಎರಡು ತಟ್ಟೆಗಳನ್ನೂ ಖಾಲಿ ಮಾಡಿಟ್ಟಿರುವ ಅವರ ಮುಖದಲ್ಲಿ ಬೆಟ್ಟ ಕಡಿದಷ್ಟು ಸಂಭ್ರಮ.ಇನ್ನು ನನ್ನ ಪ್ರತಿಕ್ರಿಯೆ ಒಂದು ನೋಡಿ, ಗಹಗಹಿಸಿ ನಕ್ಕು, ಚಹಾ ಕುಡಿದುಬಿಟ್ಟರೆ ಅವರಿಗೆ ಅಮೃತ ಕುಡಿದಷ್ಟೇ ಸಂತೋಷ.ಆದರೆ ನಾನು ಪ್ರತಿಕ್ರಿಯಿಸದೆ ಒಳನಡೆದಾಗ ಅವರಿಗೆ ಇನ್ನೊಂದು ಅಚ್ಚರಿ.
ಇನ್ನೊಂದು ಬಜ್ಜಿಯ ತಟ್ಟೆ ಅವರಂತೆಯೇ ಮುಸಿ ಮುಸಿ ನಗುತ್ತಾ ನನ್ನೊಂದಿಗೆ ಹೊರ ಬಂದಾಗ, ನಗುವುದನ್ನು ಬಿಟ್ಟು ತಟ್ಟೆಯನ್ನೇ ದಿಟ್ಟಿಸಲಾರಂಭಿಸಿದರು.ಸುಮ್ಮನೆ ತರಲೆ ಮಾಡಲು ಹೋಗಿ ನಷ್ಟವಾಯಿತಲ್ಲ ಎಂಬ ಗಾಢ ಯೋಚನೆಯಲ್ಲಿ ಮುಳುಗಿದಂತಿತ್ತು.ಯಾವಾಗಲೂ ಇದ್ದಿದ್ದನ್ನೆಲ್ಲ ಒಂದೇ ಸಲ ಎರಡು ತಟ್ಟೆಗೆ ಸುರಿದು ಮುಗಿಸುವವಳು ಹೀಗೇಕೆ ಮಾಡಿದಳು ಎಂದು ಅರ್ಥವಾಗದ ಮುಖಭಾವ ನೋಡಿ ನಾನು ಮನದಲ್ಲೇ ನಸು ನಕ್ಕೆ. ಒಂದೆರಡಾದರೂ ತನಗೆ ಕೊಡದೆ ತಿನ್ನಳು ಎಂಬ ನಂಬಿಕೆಯೊಂದಿಗೆ ಸುಮ್ಮನೆ ಕುಳಿತಿದ್ದರು.ಒಮ್ಮೆಯೇ ಎಲ್ಲ ಹಾಕಿಕೊಟ್ಟರೆ, ಖಾಲಿ ಮಾಡಿ ಇಷ್ಟೇನಾ ಎನ್ನುತ್ತಾರೆಂದು ನಾನು ಅದನ್ನೇ ಎರಡು ತಟ್ಟೆಯಲ್ಲಿ ಹಾಕಿ ಕೊಟ್ಟಿದ್ದೆ. ನನ್ನ ಪಾಲನ್ನು ಒಳಗೇ ಎತ್ತಿಟ್ಟಿದ್ದೆ. ಅವರಂದುಕೊಂಡಂತೆಯೆ ಸ್ವಲ್ಪ ಅವರ ತಟ್ಟೆಗೆ ಸುರಿದು ಬಂದೆ.ಅವರಿಗೆ ಖುಷಿಯೋ ಖುಷಿ. ಅವರ ಪಾಲಿನದನ್ನು ಎರಡು ತಟ್ಟೆಯಲ್ಲಿ ಹಾಕಿ ಕೊಡುವಾಗಲೇ, ಅದರಲ್ಲಿ ಸ್ವಲ್ಪ ಎತ್ತಿಟ್ಟಿದ್ದ ನನಗೂ ಒಳಗೊಳಗೇ ಖುಷಿ. ನನ್ನ ನೆನಪಿನ ಬುತ್ತಿಗೊಂದು ಹೊಸ ಸೇರ್ಪಡೆಯ ಸಂಭ್ರಮ.ಯಾವಾಗಲೂ ನನಗೆ ಚಳ್ಳೆಹಣ್ಣು ತಿನ್ನಿಸಿ, ನನ್ನ ಇಂಗು ತಿಂದ ಮಂಗನಂತಾದ ಮುಖ ನೋಡಿ ಮುಸಿ ಮುಸಿ ನಗುವ ನನ್ನ ಪತಿ ಮರುದಿನ ನಿಜ ತಿಳಿದಾಗ ಪೆಚ್ಚಾದರು.ಮತ್ತೆ ಮುಖದಲ್ಲಿ ನಗು ತರಿಸಲು ಮೆಣಸಿನ ಬಜ್ಜಿ ಮಾಡಿಕೊಡಬೇಕಾಯಿತು.

very nice :) i remembered my childhood.. but i was very obedient to my elder sister.Those days will never come back...
ReplyDeletethank you for reminding me all that :)