ImageHost.org

Wednesday, March 24, 2010

ಮರುಭೂಮಿಯಲ್ಲೊಂದು ಸುಂದರ ಮಳೆ

ಅತಿ ಅಪರೂಪವೆಂಬಂತೆ ಮೋಡ ಕವಿದ ವಾತಾವರಣ.ನಿಧಾನವಾಗಿ  ಮರುಭೂಮಿಯ ಅಪರೂಪದ ಅತಿಥಿ  ಮಳೆರಾಯ ಗಗನಚುಂಬಿ ಕಟ್ಟಡಗಳಿಗೆ ಮುತ್ತಿಡಲಾರಂಭಿಸಿದ್ದ.ನಾನೆಂಬ ಕೈದಿಯನ್ನು ಮನೆಯೆಂಬ ಜೈಲಿನಿಂದ ಸ್ವಲ್ಪ ಸಮಯದ ಮಟ್ಟಿಗೆ ಶಾಪಿಂಗ್ ಮಾಲ್ ಎಂಬ ಜೈಲಿಗೆ ಕರೆದೊಯ್ದಿದ್ದ ನನ್ನ ಗಂಡ ಮರುಳಿ ಮನೆಗೆ ಸಾಗಿಸುವ ಯತ್ನದಲ್ಲಿದ್ದರು.ಆದರೆ ಈ  ಕೈದಿ ಮನ ಆ ಎರಡು ಜೈಲುಗಳ ಮಧ್ಯದ ಗಾಳಿ ಬೆಳಕಿನ ಸ್ವಚ್ಛಂದ ವಾತಾವರಣದಲ್ಲಿ ಹುಚ್ಚೆದ್ದು ಕುಣಿಯಬಯಸುತ್ತಿತ್ತು.ದೊಡ್ಡ ದೊಡ್ಡ ರಸ್ತೆಗಳ ಮಧ್ಯೆ ನಿಂತಿರುವ ಹಚ್ಚ ಹಸಿರು ಸಾಲು ಮರಗಳ ಮಧ್ಯೆ ಮೈಮರೆಯಬಯಸುತ್ತಿತ್ತು.ಆದರೆ ಈ ಮರುಭೂಮಿಯ ಜನರು ಕಷ್ಟ ಪಟ್ಟು ಬೆಳೆಸಿರುವ ಈ  ಮರಗಳು ಇವರ ಹೆಮ್ಮೆಯ ಪ್ರತೀಕ.ಇವರೆಲ್ಲಿ ಕಷ್ಟ ಪಟ್ಟಾರು. ಮಣ್ಣು, ಗಿಡಗಳೊಂದಿಗೆ ಕೆಲಸಕ್ಕೆ ಜನರನ್ನೂ ಪಾಪ ನಮ್ಮ ದೇಶಗಳಿಂದಲೇ ಆಮದು ಮಾಡಿಕೊಳ್ಳುವ ಶೋಕಿಲಾಲರು.ನಮ್ಮೂರ ವಿ.ಐ. ಪಿ. ಗಳಾದರೂ ಅಪ್ಪಿ ತಪ್ಪಿ ಒಮ್ಮೆ ಭೇಟಿಯಾದಾರು . ಆದರೆ ಈ ಸಾಲು  ಮರಗಳಲ್ಲಿಗೆ ಸಾಗಲು ಜನಸಾಮಾನ್ಯರಿಗೆ ಅನುಮತಿ ಇದೆಯೋ ತಿಳಿದಿಲ್ಲ.ನನ್ನ ಪತಿರಾಯರನ್ನು ಕೇಳೋಣವೆಂದರೆ, ಏಕೋ ಇಬ್ಬರೂ ಮೌನ ಮುರಿಯುವ ಆಸಕ್ತಿಯಲ್ಲಿರಲಿಲ್ಲ.

ನನ್ನನ್ನು, ಹಚ್ಚ ಹಸಿರಿನ ಊರಿಂದ ದುಬೈ ಎಂಬ ಮರುಭೂಮಿಗೆ  ತಂದು ಹಾಕಿದಿರೆಂದು, ದಿನಾ ಪತಿಯನ್ನು ದೂಷಿಸುವ ನನ್ನ ಬಾಯಿಗೆ ಬೀಗ ಜಡಿದಿತ್ತು. ಎಡೆಬಿಡದೆ ಮಾತಾಡಿ ತಲೆತಿನ್ನುವ ಹೆಂಡತಿ ಇಂದು ಮೌನದ ಮೊರೆ ಹೋಗಿದ್ದನ್ನು ಕಂಡು ವಿಚಿತ್ರವೆನಿಸಿದರೂ, ಅವರು ಅದನ್ನು ವಿಚಾರಿಸುವ ಗೋಜಿಗೆ ಹೋಗಲಿಲ್ಲ.ಅಪ್ಪಿ ತಪ್ಪಿ ಮೌನವಾಗಿದ್ದಾಳೆ. ಸಧ್ಯಕ್ಕೆ ಇವಳ ಬಾಯಿಗೆ ಕೋಲು ಹಾಕುವುದು ಬೇಡ.ಅಗತ್ಯ ಬಿದ್ದರೆ ನೋಡೋಣ ಎಂಬಂತೆ ಏನೋ ಗುನುಗುನಿಸುತ್ತ ಹಿಂದಿ ಸಿನಿಮಾ ಹಾಡುಗಳಲ್ಲಿ ತಲ್ಲೀನರಾಗಿದ್ದಾರೆ. ನಾನು ಮೌನವಾಗಿ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದರಲ್ಲಿ ಲೀನವಾದೆ.     ಮರುಭೂಮಿಯಲ್ಲೊಂದು ಸುಂದರ ಚಿಟಿ ಚಿಟಿ ಮಳೆ ನೋಡಲು ಮನದಲ್ಲೇನೋ ಸಂಭ್ರಮ.ನಿತ್ಯ ಕೃತಕ ಆಭರಣಗಳಿಂದ ಅಲಂಕೃತಗೊಳ್ಳುವ ದುಬೈ ನಗರಿ, ಇಂದು ಸ್ವಾತಿ ಮುತ್ತಿನಿಂದಲಂಕೃತ  ದಾವಣಿ ಹೊದ್ದ ಸುರ ಸುಂದರಿಯಂತೆ ಕಂಡಳು ನನ್ನ ಕಣ್ಣಿಗೆ.ನಿಧಾನವಾಗಿ ನನ್ನ ಮನಸ್ಸಿನ ಪಯಣ ನನ್ನೂರಿನೆಡೆಗೆ ಸಾಗಿತ್ತು. ಸಧ್ಯ, ಮನಸ್ಸಿಗೆ ವೀಸಾ, ಪಾಸ್ ಪೋರ್ಟ್, ಟಿಕೆಟ್ಗಳ ಅಗತ್ಯ ಇಲ್ಲ. ಮನಸ್ಸಾದಾಗ ಮನಸು ಊರಿಗೆ ಹೊರಟು ಬಿಡುತ್ತದೆ.ಮುಂದೊಂದು ದಿನ ಮನಸ್ಸನ್ನು ಭೌತಿಕ ವಸ್ತುವೆಂದು ಪರಿಗಣಿಸಿ, ಅದನ್ನು ಟ್ರ್ಯಾಕ್ ಮಾಡಿ ಅದಕ್ಕೂ ದರ ನಿಗದಿಪಡಿಸಿದರೆ ದೇವರೇ ಗತಿ. ಭಗವಂತ ಹಾಗಾಗದಿರಲಿ.

ಎಷ್ಟು   ಸುಂದರವಾದ ಶಾಲೆಯ ದಿನಗಳು. ಮಳೆಯಲ್ಲಿ ನೆನೆಯುತ್ತ ಮನೆಗೆ ಬರುವಾಗ ಬಾಗಿಲಲ್ಲೆ ಟವೆಲ್ ಹಿಡಿದು ಕಾಯುತ್ತ ನಿಂತಿರುತ್ತಿದ್ದಳು ಅಮ್ಮ.ಮಳೆ ಬಂದರೆ ಖುಷಿಯೋ ಖುಷಿ.ಮನೆಯಲ್ಲಿ ಸಂಜೆ ಕಾಫಿಯ ಜೊತೆ ಬಜ್ಜಿ ಬೋಂಡಗಳು ತಯಾರಾಗುತ್ತವೆ.ಆಹಾ ಈಗಲೂ ಬಾಯಲ್ಲಿ ನೀರೂರುತ್ತಿದೆ.ನನಗೆ- ತನಗೆ ಎಂದು ತಮ್ಮನೊಂದಿಗೆ ಕಚ್ಚಾಡಲು ಶುರು ಮಾಡಿದರೆ ಅಮ್ಮ ರೋಸಿ ಹೋಗುತ್ತಿದ್ದಳು. ಈಗ ನೆನಪಾದರೆ ನಗು ಬರುತ್ತದೆ.ಈಗಲಾದರೆ ನನ್ನ ಪಾಲಿನ ತಿಂಡಿಯನ್ನು ಖುಷಿ ಖುಷಿಯಾಗಿ ಪತಿರಾಯರಿಗೆ ಕೊಟ್ಟುಬಿಡುತ್ತೇನೆ.ನನ್ನ ನಳಪಾಕವನ್ನು ಅವರ ಮೇಲೆ ಪ್ರಯೋಗಿಸಿ, ಅವರ ಅಭಿಪ್ರಾಯ ತಿಳಿಯುವ ತವಕದಲ್ಲಿ ಹಸಿವಿನ ಅರಿವೇ ಆಗುವುದಿಲ್ಲ. ಪಾಪ ತಮ್ಮ.ನನಗಿಂತ ಚಿಕ್ಕವನು.ಸ್ವಲ್ಪ ಜಾಸ್ತಿ ತಿಂದರೆ ಏನಾಗುತ್ತಿತ್ತು.ಆದರೆ ಅಷ್ಟು ಒಳ್ಳೆಯ ಬುದ್ಧಿ ಆಗ ಇರಲಿಲ್ಲವಲ್ಲ, ಏನು ಮಾಡುವುದು? ಏನೇ ಆಗಲಿ, ಈಗ ಅವೆಲ್ಲ ಸುಂದರ ನೆನಪುಗಳಾಗಿ ಮನಸ್ಸಿನ ಬುತ್ತಿಯಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ಉಳಿದು ಹೋಗಿಲ್ಲವೇ? ಚಿಕ್ಕವರಿದ್ದಾಗ ತರಲೆ ಮಾಡದೆ ಈಗ ಮಾಡಲಾದೀತೇ? 
 
ತಮ್ಮನಿಗೊಮ್ಮೆ ಫೋನಾಯಿಸಿ, ಹಳೆಯದನ್ನು ನೆನಪಿಸಿ ರೇಗಿಸಬೇಕೆನಿಸಿತು.  ಎರಡು ಮಾವಿನ ಹಣ್ಣಿನಲ್ಲಿ ಯಾವುದು ದೊಡ್ಡದು ಎಂದು ತಿಳಿಯದಾದರೆ, ಅಕ್ಕ ಮೊದಲು ತೆಗೆದುಕೊಳ್ಳಲಿ ಎಂದು ಕಾಯುತ್ತಿದ್ದ.ಆಮೇಲೆ ಅದೇ ಬೇಕೆಂದು ತಗಾದೆ ಎತ್ತುತ್ತಿದ್ದ. ಅಮ್ಮ ಬೇರೆ ಅವನ ಪಕ್ಷವೆ.ಪಾಪ ಅವನು ಚಿಕ್ಕವನಲ್ಲವೆ.ಅವನಿಗೆ ಬೇಕಾದ್ದು ಕೊಡು ಎಂದು. ನನಗಿಂತ ಎರಡು ವರ್ಷ ಚಿಕ್ಕವನು. ಇನ್ನು ಕೋಣದಂತೆ ಬೆಳೆದರೂ ಅವನೇ ಚಿಕ್ಕವನು. ನಾನು ಚಿಕ್ಕವಳಾಗಲಾದೀತೆ  ಎಂಬುದು ನನ್ನ ಸಮಸ್ಯೆ. ಕೊನೆಗೆ ಇದು ಯಾವ ಬಣ್ಣದ ಟೂತ್ ಬ್ರಶ್  ಬೇಕು, ಯಾವ ಬಣ್ಣದ ಬೆಡ್ ಶೀಟ್  ಬೇಕು ಎಂಬುದರವರೆಗೆ ಬೆಳೆದಾಗ, ಇದಕ್ಕೆ ತೆರೆ ಎಳೆಯಲು ಯಾವುದಾದರೊಂದು ಹೊಸ ದಾರಿ ಹುಡುಕಬೇಕೆನಿಸಿತ್ತು.ಅವನ ಹಟದ ಮುಂದೆ ನನ್ನ ಹಠ ಗೆಲ್ಲುತ್ತಿರಲಿಲ್ಲ.  ಏನೇ ಆಗಲಿ, ಸುಮ್ಮನೆ ಸೋಲೊಪ್ಪುವುದು ಹೇಗೆ? ನಾನು ನನಗೆ ಬೇಡವಾದದ್ದನ್ನು ಮೊದಲು ಆರಿಸಲು ಶುರುಮಾಡಿದೆ. ಅವನು ಅದೇ ಬೇಕೆಂದು ಹಠ ಹಿಡಿದು ಕಿತ್ತುಕೊಂಡು ಹೋಗುತ್ತಿದ್ದ.ನನಗೆ ಬೇಕಾದದ್ದು ನನಗೆ ಸಿಗುತ್ತಿತ್ತು.ಜೊತೆಗೆ ಅವನಿಗೆ ಚಳ್ಳೆ ಹಣ್ಣು ತಿನ್ನಿಸಿದ ಖುಷಿ ಬೇರೆ.ಈಗ ನೆನೆದು ನಗು ಬರುತ್ತಿದೆ.ಈಗ ಅವನು ನನಗೆ ಬೈದು ಬುದ್ಧಿ ಹೇಳುವ ಪರಿ ನೋಡಿದರೆ,  "ಒಂದೊಮ್ಮೆ ಇವನ ಕೈ ಹಿಡಿದು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದವಳು ನಾನೇನ" ಎಂಬ ಅನುಮಾನ ಬರುತ್ತದೆ. 

ಇಂದೇಕೋ ತಲೆಗೆ ಮತ್ತೆ ತರಲೆ ಯೋಚನೆಗಳು ಬರುತ್ತಿವೆ. ಮತ್ತೆ ಆ ಸುಂದರ ನೆನಪುಗಳಲ್ಲಿ ಬದುಕಬೇಕೆನಿಸುತ್ತಿದೆ.ಮನೆಗೆ ಬಂದವಳೇ ಮಳೆಯ ವಾತಾವರಣಕ್ಕೆ ಸರಿ ಹೊಂದುವಂತೆ ಎ.ಸಿ. ಉಷ್ಣತೆ ಕಡಿಮೆ ಮಾಡಿದೆ.ದಿನಾ ಚಳಿ ಎಂದು ಜಗಳ ಕಾಯುವವಳು ಇಂದು ತಂತಾನೇ ಚಳಿಯಲ್ಲಿರಲು ಬಯಸಿದಾಗ ನನ್ನ ಪತಿಗೆ ಆಶ್ಚರ್ಯವಾಗಿತ್ತು.ಮತ್ತೆ ಚಳಿ ತಡೆಯಲಾಗದೆ ನಾನು ಸ್ವೆಟರ್ ಹಾಕಿ ಬಂದಾಗ  ಮೃಗಾಲಯದ  ಪ್ರಾಣಿಯನ್ನು ನೋಡುತ್ತಿರುವಂತೆ ನೋಟ ಬೀರಿದರು. ಅಮ್ಮ ಮಾಡಿದ ಈರುಳ್ಳಿ ಬಜ್ಜಿಯಂತೂ ಕನಸೇ ಸರಿ. ಸರಿ, ನಾನೇ ಮಾಡೋಣವೆಂದು ಹೊರಟೆ. "ಡಯಟಿಂಗ್" ಎಂಬ ಹೆಸರಿನಲ್ಲಿ ಬಿಸಿಎಣ್ಣೆ ಪದಾರ್ಥಗಳ ಪರಿಮಳ ಮೂಗಿಗೆ ಬಡಿಯದೆ ತಿಂಗಳುಗಳೇ ಆಗಿದ್ದವು.ಇಂದೇಕೋ ಹಬ್ಬ ಆಚರಿಸುವಷ್ಟು ಸಂಭ್ರಮ.ಅಡಿಗೆ ಮನೆಯ ಕಿಟಕಿಯಿಂದ ಮಳೆ ನೋಡಲು ಮತ್ತೆ ಇಣುಕಿದೆ.ರಸ್ತೆ ಬದಿಯಲ್ಲಿ ಥಳಕು ಬಳಕು ಸುಂದರಿಯರಂತೆ, ಉದ್ದುದ್ದ ಬೆಳೆದು ನಿಂತಿರುವ ಮರಗಳಿಗೂ ಸಂಭ್ರಮ.   ಎಲ್ಲಿಂದಲೋ ಆಮದಾಗುವ ಚೂರು ಪಾರು ಮಣ್ಣಿನಲ್ಲಿ ಪಾಪ ಅವು ನಮ್ಮೂರ ಮರಗಳಂತೆ ಅಡ್ಡಡ್ಡ ಚಾಚಿಕೊಳ್ಳಲು ಸಾಧ್ಯವೇ? ಅವುಗಳದು ಒತ್ತಾಯ ಪೂರ್ವಕ ಡಯೆಟಿಂಗ್.ಇಂದು ಮನಸ್ಪೂರ್ತಿಯಾಗುವವರೆಗೆನೀರು ಕುಡಿಯುವ ಆತುರದಲ್ಲಿದ್ದಂತೆನಿಸಿತು. ಒಂದಕ್ಕಿಂತ ಒಂದು ಎತ್ತರದ ಕಟ್ಟಡಗಳು ಮಳೆರಾಯನ ಸ್ವಾಗತಕ್ಕೆ ಆಗಸಕ್ಕೇ ಲಗ್ಗೆ ಇಟ್ಟಂತಿತ್ತು.
 
ನನ್ನ ಪತಿರಾಯರು ಬಜ್ಜಿ ಯಾವಾಗ ಸಿಗುವುದೋ ಎಂದು ವಾರದಿಂದ ಹಸಿದಿದ್ದವರಂತೆ ಕಾಯುತ್ತ ಕುಳಿತರು. ಬಜ್ಜಿಯ ಜೊತೆ ಇನ್ನೊಂದು ಚಹಾ ಬೇರೆ ಸಿಗುತ್ತದೆಂದು ಹಿಗ್ಗುತ್ತಿದ್ದರು. ಅಂತೂ ಇನ್ನೊಂದು ಮುಕ್ಕಾಲು ಗಂಟೆಯಲ್ಲಿ ನನ್ನ ಬಜ್ಜಿ ಪುರಾಣ ಮುಗಿಯುವ ಹಂತಕ್ಕೆ ಬಂತು.ಅಮ್ಮನ ಬಜ್ಜಿಯಷ್ಟು ರುಚಿಯಾಗದಿದ್ದರೂ ಮನಸ್ಸಿಗೆ ಖುಷಿಯಾಗಿತ್ತು. ಬಜ್ಜಿಗಳನ್ನು ಎರಡು ತಟ್ಟೆಗಳಲ್ಲಿ ಹಾಕಿ ತಂದೆ. ಮೊದಮೊದಲು ನನ್ನ ಹೊಸರುಚಿಯೆಂದರೆ ಬೆಚ್ಚಿಬೀಳುತ್ತಿದ್ದ ನನ್ನ ಪತಿಗೆ ಈಗ ಅದು ಅಭ್ಯಾಸವಾದಂತಿದೆ.   ಬಜ್ಜಿಯ ತಟ್ಟೆ ಯಾವಾಗ ಎದುರು ಬರುವುದೋ ಎಂದು ಕಾಯುತ್ತ,  ಕಾತರ ಗೋಚರಿಸದಿರಲೆಂದು, ಕಾಮೆಡಿ ಶೋವನ್ನು ಕೂಡ ರಾಜ ಗಾಂಭೀರ್ಯದಿಂದ  ನೋಡುತ್ತ ಕುಳಿತಿದ್ದರು. ಬಜ್ಜಿಯನ್ನು ಅವರ ಮುಂದಿತ್ತು ಚಹಾ ತರುವೆನೆಂದು ಹೋದೆ.ಸ್ವಲ್ಪ ಸಮಯದಲ್ಲಿ ಚಹಾ ಹಿಡಿದು ಬಂದ ನನ್ನ ನೋಡಿ ನನ್ನ ಪತಿರಾಯರು ಮುಸಿ ಮುಸಿ ನಗುತ್ತಾ ಕುಳಿತಿದ್ದಾರೆ. ಎರಡು ತಟ್ಟೆಗಳನ್ನೂ ಖಾಲಿ ಮಾಡಿಟ್ಟಿರುವ ಅವರ ಮುಖದಲ್ಲಿ ಬೆಟ್ಟ ಕಡಿದಷ್ಟು ಸಂಭ್ರಮ.ಇನ್ನು ನನ್ನ ಪ್ರತಿಕ್ರಿಯೆ ಒಂದು ನೋಡಿ, ಗಹಗಹಿಸಿ ನಕ್ಕು, ಚಹಾ ಕುಡಿದುಬಿಟ್ಟರೆ ಅವರಿಗೆ ಅಮೃತ ಕುಡಿದಷ್ಟೇ ಸಂತೋಷ.ಆದರೆ ನಾನು ಪ್ರತಿಕ್ರಿಯಿಸದೆ ಒಳನಡೆದಾಗ ಅವರಿಗೆ ಇನ್ನೊಂದು ಅಚ್ಚರಿ. 

ಇನ್ನೊಂದು ಬಜ್ಜಿಯ ತಟ್ಟೆ ಅವರಂತೆಯೇ ಮುಸಿ ಮುಸಿ ನಗುತ್ತಾ ನನ್ನೊಂದಿಗೆ ಹೊರ ಬಂದಾಗ, ನಗುವುದನ್ನು ಬಿಟ್ಟು ತಟ್ಟೆಯನ್ನೇ ದಿಟ್ಟಿಸಲಾರಂಭಿಸಿದರು.ಸುಮ್ಮನೆ ತರಲೆ ಮಾಡಲು ಹೋಗಿ ನಷ್ಟವಾಯಿತಲ್ಲ ಎಂಬ ಗಾಢ ಯೋಚನೆಯಲ್ಲಿ ಮುಳುಗಿದಂತಿತ್ತು.ಯಾವಾಗಲೂ ಇದ್ದಿದ್ದನ್ನೆಲ್ಲ ಒಂದೇ ಸಲ ಎರಡು ತಟ್ಟೆಗೆ ಸುರಿದು ಮುಗಿಸುವವಳು ಹೀಗೇಕೆ ಮಾಡಿದಳು ಎಂದು ಅರ್ಥವಾಗದ ಮುಖಭಾವ ನೋಡಿ ನಾನು ಮನದಲ್ಲೇ ನಸು ನಕ್ಕೆ.  ಒಂದೆರಡಾದರೂ ತನಗೆ ಕೊಡದೆ ತಿನ್ನಳು ಎಂಬ ನಂಬಿಕೆಯೊಂದಿಗೆ ಸುಮ್ಮನೆ ಕುಳಿತಿದ್ದರು.ಒಮ್ಮೆಯೇ ಎಲ್ಲ ಹಾಕಿಕೊಟ್ಟರೆ, ಖಾಲಿ ಮಾಡಿ ಇಷ್ಟೇನಾ ಎನ್ನುತ್ತಾರೆಂದು ನಾನು ಅದನ್ನೇ ಎರಡು ತಟ್ಟೆಯಲ್ಲಿ ಹಾಕಿ ಕೊಟ್ಟಿದ್ದೆ. ನನ್ನ ಪಾಲನ್ನು ಒಳಗೇ ಎತ್ತಿಟ್ಟಿದ್ದೆ.  ಅವರಂದುಕೊಂಡಂತೆಯೆ ಸ್ವಲ್ಪ ಅವರ ತಟ್ಟೆಗೆ ಸುರಿದು ಬಂದೆ.ಅವರಿಗೆ ಖುಷಿಯೋ ಖುಷಿ. ಅವರ ಪಾಲಿನದನ್ನು ಎರಡು ತಟ್ಟೆಯಲ್ಲಿ ಹಾಕಿ ಕೊಡುವಾಗಲೇ, ಅದರಲ್ಲಿ ಸ್ವಲ್ಪ ಎತ್ತಿಟ್ಟಿದ್ದ ನನಗೂ ಒಳಗೊಳಗೇ  ಖುಷಿ. ನನ್ನ ನೆನಪಿನ ಬುತ್ತಿಗೊಂದು ಹೊಸ ಸೇರ್ಪಡೆಯ ಸಂಭ್ರಮ.ಯಾವಾಗಲೂ ನನಗೆ ಚಳ್ಳೆಹಣ್ಣು ತಿನ್ನಿಸಿ, ನನ್ನ ಇಂಗು ತಿಂದ ಮಂಗನಂತಾದ ಮುಖ ನೋಡಿ ಮುಸಿ ಮುಸಿ ನಗುವ ನನ್ನ ಪತಿ ಮರುದಿನ ನಿಜ ತಿಳಿದಾಗ ಪೆಚ್ಚಾದರು.ಮತ್ತೆ ಮುಖದಲ್ಲಿ ನಗು ತರಿಸಲು ಮೆಣಸಿನ ಬಜ್ಜಿ ಮಾಡಿಕೊಡಬೇಕಾಯಿತು.
 
 





Friday, March 5, 2010

ಸ್ನೇಹ - ಗೆಳೆಯರ ಬಳಗಕ್ಕೆ ಹೀಗೊಂದು ಅರ್ಪಣೆ


ಸ್ನೇಹ, ಇದು ಬದುಕಿನ ಎಲ್ಲ ಬಂಧನಗಳಾಚೆಯ ಒಂದು ಸುಂದರ ಸಂಬಂಧ.ಸ್ನೇಹವಿಲ್ಲದ ಬದುಕು ಬಂಜರು ಭೂಮಿ.ನೀವೇ ನೋಡಿ. ಬದುಕಿನಲ್ಲಿ ಬರುವ ಎಲ್ಲ ಸಂಬಂಧದ ಕೊಂಡಿಗಳೂ ಸ್ನೇಹವಿಲ್ಲದಿದ್ದರೆ ನೀರಸವೆನಿಸಿಬಿಡುತ್ತವೆ. ಅಪ್ಪನಿಗೆ ಮಗನೆಂದರೆ ಎಷ್ಟು ಪ್ರೀತಿ ಇದ್ದರೂ, ಅಪ್ಪ ಅತಿ ಶಿಸ್ತಿನಿಂದ ವರ್ತಿಸಿದರೆ ಮಗನಿಗೆ ಕಿರಿ ಕಿರಿ ಎನಿಸಬಹುದು.ಅವನ ಭಾವನೆಗಳನ್ನು ವ್ಯಕ್ತಪಡಿಸದೆ ಮಗ ಒಳಗೊಳಗೇ ಕೊರಗಿ ಒಂದು ದಿನ ಅಪ್ಪನಿಗೆ ಎದುರು ನಿಲ್ಲಬಹುದು. ಅದೇ ಅಪ್ಪ ತುಸು ಸ್ನೇಹ ತೋರಿಸಿದರೆ ದೊಡ್ಡ ಭಿನ್ನಾಭಿಪ್ರಾಯಗಳು, ವೈಮನಸ್ಸುಗಳು ಉಂಟಾಗುವ ಪ್ರಮೇಯವೇ ಎದುರಾಗುವುದಿಲ್ಲ. ಇಬ್ಬರ ವಿಚಾರಧಾರೆಯಲ್ಲಿ ಅಂತರ ಬಂದಂದೇ ಒಟ್ಟಿಗೆ ಕುಳಿತು ಚರ್ಚಿಸಿ ಪರಿಹರಿಸಿಬಿಡಬಹುದು. ಅಪ್ಪನಿಗೆ ಎಂದೂ ಮಗನನ್ನು ಕಳೆದುಕೊಳ್ಳುವ ಭಯ ಎದುರಾಗುವುದೇ ಇಲ್ಲ.ಇದು ಒಂದು ಪುಟ್ಟ  ಉದಾಹರಣೆಯಷ್ಟೆ.ಸ್ನೇಹವಿಲ್ಲದೆ ಯಾವ ಸಂಬಂಧಗಳೂ ಪರಿಪೂರ್ಣವೆನಿಸುವುದಿಲ್ಲ. ತಾಯಿ-ಮಗಳು,  ಅಕ್ಕ-ತಂಗಿ, ಅಣ್ಣ-ತಮ್ಮ, ಬಂಧು-ಬಳಗ, ಹೀಗೆ  ಇಡೀ ಬದುಕಿನಲ್ಲಿ ಸ್ನೇಹ ಹಾಸು ಹೊಕ್ಕಾದಾಗ ಬದುಕು ಅತಿ ಸುಂದರವೆನಿಸುತ್ತದೆ. 


ಸ್ನೇಹಕ್ಕೆ ತನ್ನದೇ ಆದ ಒಂದು ಸೌಂದರ್ಯವಿದೆ. ಆಕರ್ಷಣೆ ಇದೆ. ಅದಕ್ಕೇ ಇರಬೇಕು, ಸ್ನೇಹಭಾವಕ್ಕೆ ಆಂಗ್ಲ ಭಾಷೆಯಲ್ಲಿ  "ಫ್ರೆಂಡ್ಲಿ ನೇಚರ್" ಎಂಬ ದೊಡ್ಡ ಹಣೆ ಪಟ್ಟಿ ಇಟ್ಟು ಮನುಷ್ಯರ ವ್ಯಕ್ತಿತ್ವ ಅಳೆಯುವ ಸಾಧನವಾಗಿ ಉಪಯೋಗಿಸುತ್ತಾರೆ.  ಸ್ನೇಹಕ್ಕೆ ವಯಸ್ಸಿನ ಅಂತರವಿಲ್ಲ. ಸ್ನೇಹ ಹುಟ್ಟುವುದು ಸಮಾನ ಮನಸ್ಕರಲ್ಲಿ. ಕಂಬೈನ್ ಸ್ಟಡೀಗೆಂದು ಗೆಳತಿಯ ಮನೆಗೆ ಹೋಗಿ, ಅವಳ ಅಮ್ಮನೊಂದಿಗೆ ಗಂಟೆಗಟ್ಟಲೆ ಹರಟಿ ಬಂದಿರುತ್ತೇವೆ. ಮನೆಗೆ ಬಂದ ಮೇಲೆ ಓದಿಕೋ ಎಂದ ಅಮ್ಮನಿಗೆ ಉಪದೇಶ ಬೇರೆ."ಸ್ನೇಹಳ ಅಮ್ಮ ಎಷ್ಟು ಫ್ರೆಂಡ್ಲಿ ಆಗಿದಾರೆ ಗೊತ್ತಾ? ನೀನು ನೋಡಿದ್ರೆ ನಂಗೆ ಯಾವಾಗ್ಲೂ ಬೈತೀಯ" ಎಂದು ಸಪ್ಪೆ ಮುಖ ಮಾಡಿದ ಮಗಳ ನೋಡಿ ಅಮ್ಮ ನಕ್ಕುಬಿಡುತ್ತಾಳೆ. "ಸರಿ ಬಾ, ನಾನೂ ಅದೇ ಮಾಡುತ್ತೇನೆ, ಪರೀಕ್ಷೆ ಬರೆಯಲು ನಿಮ್ಮ ಅಪ್ಪನ ಕಳಿಸುವ" ಎಂದು ತಮಾಷೆ ಮಾಡುತ್ತಾಳೆ.ಇದು ಅಮ್ಮನೊಳಗಿನ ಸ್ನೇಹಿತೆ ಆಡಿದ ಮಾತಲ್ಲವೇ? ಅಮ್ಮನೊಳಗೆ ಒಬ್ಬ ಸ್ನೇಹಿತೆಯನ್ನು ಕಾಣದಿದ್ದರೆ, ನಾವು ಅವಳ ಮುಂದೆ ಇಷ್ಟುದ್ದ ಭಾಷಣ ಬಿಗಿಯುವುದೇ ಇಲ್ಲ. 


ಸ್ನೇಹವೆಂಬುದು ಭಗವಂತನ ಒಂದು ಅತಿ ಅದ್ಭುತ ಕಲ್ಪನೆ. ಎಲ್ಲೋ ಅತಿ ಪ್ರಸನ್ನನಾಗಿರುವಾಗ ಈ ಕಲ್ಪನೆಯ ಸೃಷ್ಠಿ ಮಾಡಿರಬೇಕು.ಆದ್ದರಿಂದಲೇ  ಬಹುಶಃ  ಭಗವಂತ ಸ್ನೇಹಕ್ಕೆ ಯಾವ ನಿರ್ಬಂಧಗಳನ್ನೂ ಹೇರಿಲ್ಲ.ಸ್ನೇಹವು ಯಾವ ಕಾನೂನು ಕಾಯ್ದೆಗಳ ಅಡಿಯಲ್ಲೂ ಬರುವುದಿಲ್ಲ.ಸ್ನೇಹಕ್ಕೆ ವಯಸ್ಸಿನ ಅಂತರವಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರ ಮನದಲ್ಲೂ, ಯಾವ ಜಾತಿ ಯಾವ ಧರ್ಮದವನ ಮನಸಲ್ಲೂ, ಬಡವ - ಧನಿಕ ಎಂಬ ಯಾವ ಭೇದವೂ ಇಲ್ಲದೆ ಭಗವಂತ ಸ್ನೇಹವನ್ನು ಎಲ್ಲೆಡೆ ಹರಿದಾಡಲು ಬಿಟ್ಟಿದ್ದಾನೆ. ಒಂದು ಹುಡುಗ ಮತ್ತು ಹುಡುಗಿ ಪ್ರೀತಿಯಲ್ಲಿ ಬಿದ್ದಿದ್ದಾರೆಂದರೆ ತಕ್ಷಣ ನೂರಾರು ವೈರಿಗಳು ಹುಟ್ಟಿಬಿಡುತ್ತಾರೆ.ಎರಡು ಕುಟುಂಬದವರೂ ಒಂದೊಂದು ಪಂಗಡ ಮಾಡಿಕೊಂಡು ಯುದ್ಧಕಿಳಿದು ಬಿಡುತ್ತಾರೆ. ಆದರೆ ಸ್ನೇಹ ಅಜಾತ ಶತ್ರು. ಸ್ನೇಹವು ಎಲ್ಲ ಭಾವನೆಗಳ ಒಂದು ಹದವಾದ ಮಿಶ್ರಣ. ಸ್ನೇಹಕ್ಕೆ ಪ್ರೀತಿಗಿರುವಂತೆ ಒಂದು ಅತಿರೇಕದ ರೂಪವಿಲ್ಲ. ಸ್ನೇಹ ಸಾಧ್ವಿ,  ಪರೋಪಕಾರಿ.ಸ್ನೇಹವಿಲ್ಲದ ಪ್ರೀತಿ ಅಪೂರ್ಣ. ಪ್ರೀತಿಸಿ ವಿವಾಹವಾಗಿಯೂ ನಿತ್ಯ ಕಚ್ಚಾಡಿ ವಿಚ್ಚೇದನ ಪಡೆದ ಜೋಡಿ ಒಬ್ಬರನ್ನೊಬ್ಬರು ವೈರಿಗಳಂತೆ ದ್ವೇಷಿಸಬಹುದು.ಆದರೆ ಸ್ನೇಹ ಭಾವವು ಅಂತಹ ಕಹಿ ಘಟನೆಗಳಿಗೆ ಎಡೆ ಕೊಡುವುದೇ ಇಲ್ಲ.ಸ್ನೇಹವು ಪ್ರೀತಿಯ ಆಧಾರ ಸ್ತಂಭದಂತೆ. ಸ್ನೇಹ ನಿಸ್ವಾರ್ಥಿ.ಸಣ್ಣ ಪುಟ್ಟ ಕಲಹಗಳಿಂದ  ಸಂಸಾರದಲ್ಲಿ ಬಿರುಕು ಮೂಡದಂತೆ ಬೆಸೆದು ಬಿಡುತ್ತದೆ. ಪ್ರೀತಿಯನ್ನು ಮೆರೆಸಿ ತಾನು ಎಲೆ ಮರೆಯ ಕಾಯಂತಿದ್ದು ಬಿಡುತ್ತದೆ. 


ಸ್ನೇಹಿತರಿಲ್ಲದ ಬದುಕು ಕಲ್ಪಿಸಲಸಾಧ್ಯ.  ಆಗ ತಾನೇ ಶಾಲೆಗೆ ಸೇರಿದ ಮಗುವನ್ನು ಕೇಳಿ ನೋಡಿ, ನಿನ್ನ ಗೆಳೆಯರ ಹೆಸರೇನೆಂದು. ಅದು ಎಷ್ಟು ಹೆಮ್ಮೆಯಿಂದ ತೊದಲತೊಡಗುತ್ತದೆ. ನಾವೇ ಬೇರೆ ಸುದ್ದಿ ತೆಗೆಯಬೇಕು ಬಿಟ್ಟರೆ ಅದರ ಪಟ್ಟಿ ಮುಗಿಯುವುದೇ ಇಲ್ಲ. ಯಾರನ್ನೂ ಮರೆಯದಂತೆ ನೆನಪು ಮಾಡಿ ಮಾಡಿ ಬೆರಳಲ್ಲಿ ಎಣಿಸುತ್ತಾ ಹೇಳುತ್ತದೆ. ಏನೂ ಅರಿಯದ ಪುಟ್ಟ ಮಗುವಿರುವಾಗಲೇ ಸ್ನೇಹದ, ಸ್ನೇಹಿತರ ಬಗೆಗಿನ ಒಂದು ಒಲವು ಮೂಡಿಬಿಡುತ್ತದೆ. ಅದೇ ಸ್ನೇಹಿತರಿಲ್ಲದಿದ್ದರೆ ಶಾಲೆಗೆ ಹೋಗುವುದು ಶಿಕ್ಷೆಯೆನಿಸುತ್ತದೆ.   ಇದು ಬರಿ ಪುಟ್ಟ ಮಕ್ಕಳಿಗೆ ಸೀಮಿತವಲ್ಲ. ಕಾಲೆಜ್  ಹೋಗುವ ಒಬ್ಬ ಹುಡುಗನ ವಿಚಾರಿಸಿ ನೋಡಿ.ಅವನು ಅವನ ಗೆಳೆಯರ ಗುಂಪನ್ನು ಒಂದು ದೊಡ್ಡ ಆಸ್ತಿ ಎಂಬಂತೆ ವರ್ಣಿಸುತ್ತಾನೆ.ಅಪ್ಪನ ಕೇಳಿ ನೋಡಿ, ಊರಿಗೆ ಹೋದರೆ ಅಪ್ಪ ಮೊದಲು ಓಡುವುದು   ತನ್ನ ಎಳೆತನದ ಗೆಳೆಯನ ನೋಡಲು.ಅಮ್ಮನ ಕೇಳಿ ನೋಡಿ,ಮದುವೆಯಾಗಿ ಬೇರೆ ಊರಿಗೆ ಹೋದ ಗೆಳತಿಯ, ವರ್ಷಗಳು ಹಳತಾದ ಪತ್ರವನ್ನು ಜೋಪಾನವಾಗಿ ಎತ್ತಿಟ್ಟಿರುತ್ತಾಳೆ.ಸಂಸಾರದ ತಾಪತ್ರಯಗಳಲ್ಲಿ ಮುಳುಗಿ ಸಂಪರ್ಕ ಕಡಿದು ಹೋಗಿದ್ದರೂ, ಎಂದಾದರೊಂದು ದಿನ ಇಬ್ಬರೂ ಭೇಟಿಯಾದಾರೆಂಬ ಆಸೆ. ಸಂಗ ಜೀವಿಯಾದ ಮನುಷ್ಯನಿಗೆ ಸ್ನೇಹಿತರು ಪುಟ್ಟ ಮಗುವಿನಿಂದ ಹಿಡಿದು ಮುಪ್ಪಿನವರೆಗೂ, ಬದುಕಿನ ಪಯಣದಲ್ಲಿ  ಸಹಚರಿಗಳಾಗುತ್ತಾರೆ.ಪ್ರತಿ ಹಂತದಲ್ಲೂ ಮನುಷ್ಯ ಸ್ನೇಹಕ್ಕಾಗಿ ಎದುರು ನೋಡುತ್ತಾನೆ. ನಿಜ, ಸ್ನೇಹಿತರಿಲ್ಲದ ಬದುಕು ಕಲ್ಪಿಸಲಸಾಧ್ಯ.

Saturday, February 20, 2010

Just for Info : Celebration of Friendship


Human beings are social creatures and have always valued the importance of friends in their lives. To celebrate this noble feeling it was deemed fit to have a day dedicated to friends and friendship. Accordingly, first Sunday f August was declared as a holiday in US in honor of friends by a Proclamation made by US Congress in 1935. Since then, World Friendship Day is being celebrated every year on the first Sunday in the month of August.

This beautiful idea of celebrating Friendship Day was joyfully accepted by several other countries across the world. And today, many countries including India, celebrate the first Sunday of August as Friendship Day every year. Celebrating Friendship Day in a traditional manner, people meet their friends and exchange cards and flowers to honor their friends. Lot many social and cultural organizations too celebrate the occasion and mark Friendship Day by hosting programs and get together.
It may be noted that some associations celebrate Friendship Day in an entirely different time of the year and with different customs. For instance,

·       National Friendship Day is on the first Sunday in August.
·        Women's Friendship Day is on the third Sunday in August
·        International Friendship Month is February
·        Old Friends, New Friends Week is the third week of May

However, what is remarkably same is the idea behind the celebration of the day. Everywhere, people express love for their friends and cherish their presence in life.

Monday, August 17, 2009

ಮಮತೆ


ಅಮ್ಮ ಅರಿಯದೇ ಹೋದೆ, ನಾನಿಟ್ಟ ಗೆಲುವಿನ ಪ್ರತಿ ಹೆಜ್ಜೆ
ನಿನ್ನ ತ್ಯಾಗದ ಫಲವೆಂದು
ಕಾಡುವೆನಾ ದೈವವನು, ಮರುಜನ್ಮದಲು ನನ್ನ
ನಿನ್ನೊಡಲ ಕುಡಿಯಾಗಿಸೆಂದು.
ಮತ್ತೊಮ್ಮೆ ಮುದುಡಿ ಮಲಗುವಾಸೆ ನಿನ್ನ ಮಡಿಲಲ್ಲಿ
ಮರೆತು ನನ್ನೆಲ್ಲ ಚಿಂತೆ
ಜನ್ಮ ಜನ್ಮಾಂತರಕೂ ನನ್ನದಾಗಿರಲಿ
 ಬತ್ತದ ಮಮತೆಯ ಒರತೆ.

Sunday, August 16, 2009

ಹಕ್ಕು

ಅನುಕ್ಷಣವು ಸಂತಸದ ಸವಿ ತಂದಿಹುದು
ನಾ ಬಯಸಿದೈಸಿರಿ, ನಿನ್ನೊಡನಾಟದ ಬದುಕು.
ಗೆಳೆಯಾ, ನಿನ್ನ ನೋವಲ್ಲೂ ನನ್ನ ಪಾಲಿಹುದು
ಕನಿಕರಿಸಿ ಕಸಿಯದಿರು ಆ ನನ್ನ ಹಕ್ಕು.

Friday, July 31, 2009

ಹುಡುಕಾಟ




ಹುಡುಕಾಡಿದೆ ನಾನೆಂಟು ದಿಕ್ಕೂ
ನೀ ಕಾಣಲಿಲ್ಲ,
ತಡಕಾಡಿದೆ ಎನ್ನ ಎಡಕು ಬಲಕು
ನಿನ್ನ ಸುಳಿವಿಲ್ಲ.

ಬಳಿಯಿಲ್ಲ ನೀನೆಂದು ದುಃಖಿಸಲು ನೀ ಕಂಡೆ
ಎನ್ನ ಕಣ್ಣೀರ ಹನಿಯಲ್ಲಿ,
ಕಪ್ಪಿಟ್ಟ ಮೊಗ ನೋಡೆ ಕನ್ನಡಿಯ ದಿಟ್ಟಿಸಿದೆ
ನಿನ ಕಂಡೆ ಎನ್ನ ಕಣ್ಣಲ್ಲಿ.

ಎಲ್ಲಿರುವೆ ನೀನೆಂದು ಮರುಕ್ಷಣವೆ ನಾನರಿತೆ
ಎನ್ನ ಹೃದಯಾಂತರಾಳವೆ ನಿನ್ನ ಮನೆ,
ಧನ್ಯೆ ನಿನಗೆ ಜನ್ಮ ನೀಡಿದ ಮಾತೆ
ಅವಳೇ ಎನ್ನ ಮನದ ಭಾವನೆ.



ಬಾಲ್ಯದ ಸೊಗಸು


                                               



ಕಾರು ಬಂಗಲೆಯಿಲ್ಲ, ಒಡವೆ ವಸ್ತ್ರಗಳಿಲ್ಲ
ಎಂದು ರೋದಿಸುತ್ತ ಕುಳಿತಿದ್ದ ನನಗೆ,
ಅಣಕಿಸಿತು "ಅಮ್ಮ ನೋಡು ನಾನು ರಾಜಕುಮಾರ"
ಎಂದು ಅಂಗಳದ ನಡುವಲ್ಲಿ ಮಣ್ಣಾಡುತಿದ್ದ
ಎನ್ನ ಮುದ್ದು ಕಂದನ ಹುಸಿನಗೆ.