ಸ್ನೇಹ, ಇದು ಬದುಕಿನ ಎಲ್ಲ ಬಂಧನಗಳಾಚೆಯ ಒಂದು ಸುಂದರ ಸಂಬಂಧ.ಸ್ನೇಹವಿಲ್ಲದ ಬದುಕು ಬಂಜರು ಭೂಮಿ.ನೀವೇ ನೋಡಿ. ಬದುಕಿನಲ್ಲಿ ಬರುವ ಎಲ್ಲ ಸಂಬಂಧದ ಕೊಂಡಿಗಳೂ ಸ್ನೇಹವಿಲ್ಲದಿದ್ದರೆ ನೀರಸವೆನಿಸಿಬಿಡುತ್ತವೆ. ಅಪ್ಪನಿಗೆ ಮಗನೆಂದರೆ ಎಷ್ಟು ಪ್ರೀತಿ ಇದ್ದರೂ, ಅಪ್ಪ ಅತಿ ಶಿಸ್ತಿನಿಂದ ವರ್ತಿಸಿದರೆ ಮಗನಿಗೆ ಕಿರಿ ಕಿರಿ ಎನಿಸಬಹುದು.ಅವನ ಭಾವನೆಗಳನ್ನು ವ್ಯಕ್ತಪಡಿಸದೆ ಮಗ ಒಳಗೊಳಗೇ ಕೊರಗಿ ಒಂದು ದಿನ ಅಪ್ಪನಿಗೆ ಎದುರು ನಿಲ್ಲಬಹುದು. ಅದೇ ಅಪ್ಪ ತುಸು ಸ್ನೇಹ ತೋರಿಸಿದರೆ ದೊಡ್ಡ ಭಿನ್ನಾಭಿಪ್ರಾಯಗಳು, ವೈಮನಸ್ಸುಗಳು ಉಂಟಾಗುವ ಪ್ರಮೇಯವೇ ಎದುರಾಗುವುದಿಲ್ಲ. ಇಬ್ಬರ ವಿಚಾರಧಾರೆಯಲ್ಲಿ ಅಂತರ ಬಂದಂದೇ ಒಟ್ಟಿಗೆ ಕುಳಿತು ಚರ್ಚಿಸಿ ಪರಿಹರಿಸಿಬಿಡಬಹುದು. ಅಪ್ಪನಿಗೆ ಎಂಸ್ನೇಹಕ್ಕೆ ತನ್ನದೇ ಆದ ಒಂದು ಸೌಂದರ್ಯವಿದೆ. ಆಕರ್ಷಣೆ ಇದೆ. ಅದಕ್ಕೇ ಇರಬೇಕು, ಸ್ನೇಹಭಾವಕ್ಕೆ ಆಂಗ್ಲ ಭಾಷೆಯಲ್ಲಿ "ಫ್ರೆಂಡ್ಲಿ ನೇಚರ್" ಎಂಬ ದೊಡ್ಡ ಹಣೆ ಪಟ್ಟಿ ಇಟ್ಟು ಮನುಷ್ಯರ ವ್ಯಕ್ತಿತ್ವ ಅಳೆಯುವ ಸಾಧನವಾಗಿ ಉಪಯೋಗಿಸುತ್ತಾರೆ. ಸ್ನೇಹಕ್ಕೆ ವಯಸ್ಸಿನ ಅಂತರವಿಲ್ಲ. ಸ್ನೇಹ ಹುಟ್ಟುವುದು ಸಮಾನ ಮನಸ್ಕರಲ್ಲಿ. ಕಂಬೈನ್ ಸ್ಟಡೀಗೆಂದು ಗೆಳತಿಯ ಮನೆಗೆ ಹೋಗಿ, ಅವಳ ಅಮ್ಮನೊಂದಿಗೆ ಗಂಟೆಗಟ್ಟಲೆ ಹರಟಿ ಬಂದಿರುತ್ತೇವೆ. ಮನೆಗೆ ಬಂದ ಮೇಲೆ ಓದಿಕೋ ಎಂದ ಅಮ್ಮನಿಗೆ ಉಪದೇಶ ಬೇರೆ."ಸ್ನೇಹಳ ಅಮ್ಮ ಎಷ್ಟು ಫ್ರೆಂಡ್ಲಿ ಆಗಿದಾರೆ ಗೊತ್ತಾ? ನೀನು ನೋಡಿದ್ರೆ ನಂಗೆ ಯಾವಾಗ್ಲೂ ಬೈತೀಯ" ಎಂದು ಸಪ್ಪೆ ಮುಖ ಮಾಡಿದ ಮಗಳ ನೋಡಿ ಅಮ್ಮ ನಕ್ಕುಬಿಡುತ್ತಾಳೆ. "ಸರಿ ಬಾ, ನಾನೂ ಅದೇ ಮಾಡುತ್ತೇನೆ, ಪರೀಕ್ಷೆ ಬರೆಯಲು ನಿಮ್ಮ ಅಪ್ಪನ ಕಳಿಸುವ" ಎಂದು ತಮಾಷೆ ಮಾಡುತ್ತಾಳೆ.ಇದು ಅಮ್ಮನೊಳಗಿನ ಸ್ನೇಹಿತೆ ಆಡಿದ ಮಾತಲ್ಲವೇ? ಅಮ್ಮನೊಳಗೆ ಒಬ್ಬ ಸ್ನೇಹಿತೆಯನ್ನು ಕಾಣದಿದ್ದರೆ, ನಾವು ಅವಳ ಮುಂದೆ ಇಷ್ಟುದ್ದ ಭಾಷಣ ಬಿಗಿಯುವುದೇ ಇಲ್ಲ.
ಸ್ನೇಹವೆಂಬುದು ಭಗವಂತನ ಒಂದು ಅತಿ ಅದ್ಭುತ ಕಲ್ಪನೆ. ಎಲ್ಲೋ ಅತಿ ಪ್ರಸನ್ನನಾಗಿರುವಾಗ ಈ ಕಲ್ಪನೆಯ ಸೃಷ್ಠಿ ಮಾಡಿರಬೇಕು.ಆದ್ದರಿಂದಲೇ ಬಹುಶಃ ಭಗವಂತ ಸ್ನೇಹಕ್ಕೆ ಯಾವ ನಿರ್ಬಂಧಗಳನ್ನೂ ಹೇರಿಲ್ಲ.ಸ್ನೇಹವು ಯಾವ ಕಾನೂನು ಕಾಯ್ದೆಗಳ ಅಡಿಯಲ್ಲೂ ಬರುವುದಿಲ್ಲ.ಸ್ನೇಹಕ್ಕೆ ವಯಸ್ಸಿನ ಅಂತರವಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರ ಮನದಲ್ಲೂ, ಯಾವ ಜಾತಿ ಯಾವ ಧರ್ಮದವನ ಮನಸಲ್ಲೂ, ಬಡವ - ಧನಿಕ ಎಂಬ ಯಾವ ಭೇದವೂ ಇಲ್ಲದೆ ಭಗವಂತ ಸ್ನೇಹವನ್ನು ಎಲ್ಲೆಡೆ ಹರಿದಾಡಲು ಬಿಟ್ಟಿದ್ದಾನೆ. ಒಂದು ಹುಡುಗ ಮತ್ತು ಹುಡುಗಿ ಪ್ರೀತಿಯಲ್ಲಿ ಬಿದ್ದಿದ್ದಾರೆಂದರೆ ತಕ್ಷಣ ನೂರಾರು ವೈರಿಗಳು ಹುಟ್ಟಿಬಿಡುತ್ತಾರೆ.ಎರಡು ಕುಟುಂಬದವರೂ ಒಂದೊಂದು ಪಂಗಡ ಮಾಡಿಕೊಂಡು ಯುದ್ಧಕಿಳಿದು ಬಿಡುತ್ತಾರೆ. ಆದರೆ ಸ್ನೇಹ ಅಜಾತ ಶತ್ರು. ಸ್ನೇಹವು ಎಲ್ಲ ಭಾವನೆಗಳ ಒಂದು ಹದವಾದ ಮಿಶ್ರಣ. ಸ್ನೇಹಕ್ಕೆ ಪ್ರೀತಿಗಿರುವಂತೆ ಒಂದು ಅತಿರೇಕದ ರೂಪವಿಲ್ಲ. ಸ್ನೇಹ ಸಾಧ್ವಿ, ಪರೋಪಕಾರಿ.ಸ್ನೇಹವಿಲ್ಲದ ಪ್ರೀತಿ ಅಪೂರ್ಣ. ಪ್ರೀತಿಸಿ ವಿವಾಹವಾಗಿಯೂ ನಿತ್ಯ ಕಚ್ಚಾಡಿ ವಿಚ್ಚೇದನ ಪಡೆದ ಜೋಡಿ ಒಬ್ಬರನ್ನೊಬ್ಬರು ವೈರಿಗಳಂತೆ ದ್ವೇಷಿಸಬಹುದು.ಆದರೆ ಸ್ನೇಹ ಭಾವವು ಅಂತಹ ಕಹಿ ಘಟನೆಗಳಿಗೆ ಎಡೆ ಕೊಡುವುದೇ ಇಲ್ಲ.ಸ್ನೇಹವು ಪ್ರೀತಿಯ ಆಧಾರ ಸ್ತಂಭದಂತೆ. ಸ್ನೇಹ ನಿಸ್ವಾರ್ಥಿ.ಸಣ್ಣ ಪುಟ್ಟ ಕಲಹಗಳಿಂದ ಸಂಸಾರದಲ್ಲಿ ಬಿರುಕು ಮೂಡದಂತೆ ಬೆಸೆದು ಬಿಡುತ್ತದೆ. ಪ್ರೀತಿಯನ್ನು ಮೆರೆಸಿ ತಾನು ಎಲೆ ಮರೆಯ ಕಾಯಂತಿದ್ದು ಬಿಡುತ್ತದೆ.
ಸ್ನೇಹಿತರಿಲ್ಲದ ಬದುಕು ಕಲ್ಪಿಸಲಸಾಧ್ಯ. ಆಗ ತಾನೇ ಶಾಲೆಗೆ ಸೇರಿದ ಮಗುವನ್ನು ಕೇಳಿ ನೋಡಿ, ನಿನ್ನ ಗೆಳೆಯರ ಹೆಸರೇನೆಂದು. ಅದು ಎಷ್ಟು ಹೆಮ್ಮೆಯಿಂದ ತೊದಲತೊಡಗುತ್ತದೆ. ನಾವೇ ಬೇರೆ ಸುದ್ದಿ ತೆಗೆಯಬೇಕು ಬಿಟ್ಟರೆ ಅದರ ಪಟ್ಟಿ ಮುಗಿಯುವುದೇ ಇಲ್ಲ. ಯಾರನ್ನೂ ಮರೆಯದಂತೆ ನೆನಪು ಮಾಡಿ ಮಾಡಿ ಬೆರಳಲ್ಲಿ ಎಣಿಸುತ್ತಾ ಹೇಳುತ್ತದೆ. ಏನೂ ಅರಿಯದ ಪುಟ್ಟ ಮಗುವಿರುವಾಗಲೇ ಸ್ನೇಹದ, ಸ್ನೇಹಿತರ ಬಗೆಗಿನ ಒಂದು ಒಲವು ಮೂಡಿಬಿಡುತ್ತದೆ. ಅದೇ ಸ್ನೇಹಿತರಿಲ್ಲದಿದ್ದರೆ ಶಾಲೆಗೆ ಹೋಗುವುದು ಶಿಕ್ಷೆಯೆನಿಸುತ್ತದೆ. ಇದು ಬರಿ ಪುಟ್ಟ ಮಕ್ಕಳಿಗೆ ಸೀಮಿತವಲ್ಲ. ಕಾಲೆಜ್ ಹೋಗುವ ಒಬ್ಬ ಹುಡುಗನ ವಿಚಾರಿಸಿ ನೋಡಿ.ಅವನು ಅವನ ಗೆಳೆಯರ ಗುಂಪನ್ನು ಒಂದು ದೊಡ್ಡ ಆಸ್ತಿ ಎಂಬಂತೆ ವರ್ಣಿಸುತ್ತಾನೆ.ಅಪ್ಪನ ಕೇಳಿ ನೋಡಿ, ಊರಿಗೆ ಹೋದರೆ ಅಪ್ಪ ಮೊದಲು ಓಡುವುದು ತನ್ನ ಎಳೆತನದ ಗೆಳೆಯನ ನೋಡಲು.ಅಮ್ಮನ ಕೇಳಿ ನೋಡಿ,ಮದುವೆಯಾಗಿ ಬೇರೆ ಊರಿಗೆ ಹೋದ ಗೆಳತಿಯ, ವರ್ಷಗಳು ಹಳತಾದ ಪತ್ರವನ್ನು ಜೋಪಾನವಾಗಿ ಎತ್ತಿಟ್ಟಿರುತ್ತಾಳೆ.ಸಂಸಾರದ ತಾಪತ್ರಯಗಳಲ್ಲಿ ಮುಳುಗಿ ಸಂಪರ್ಕ ಕಡಿದು ಹೋಗಿದ್ದರೂ, ಎಂದಾದರೊಂದು ದಿನ ಇಬ್ಬರೂ ಭೇಟಿಯಾದಾರೆಂಬ ಆಸೆ. ಸಂಗ ಜೀವಿಯಾದ ಮನುಷ್ಯನಿಗೆ ಸ್ನೇಹಿತರು ಪುಟ್ಟ ಮಗುವಿನಿಂದ ಹಿಡಿದು ಮುಪ್ಪಿನವರೆಗೂ, ಬದುಕಿನ ಪಯಣದಲ್ಲಿ ಸಹಚರಿಗಳಾಗುತ್ತಾರೆ.ಪ್ರತಿ ಹಂತದಲ್ಲೂ ಮನುಷ್ಯ ಸ್ನೇಹಕ್ಕಾಗಿ ಎದುರು ನೋಡುತ್ತಾನೆ. ನಿಜ, ಸ್ನೇಹಿತರಿಲ್ಲದ ಬದುಕು ಕಲ್ಪಿಸಲಸಾಧ್ಯ.

No comments:
Post a Comment